ಸಾಗರ
From Wikipedia
ಸಾಗರ ಶಿವಮೊಗ್ಗ ಜಿಲ್ಲೆಯ ಒಂದು ಪಟ್ಟಣ ಮತ್ತು ಅದೇ ಹೆಸರಿನ ತಾಲೂಕಿನ ಆಡಳಿತ ಕೇಂದ್ರ. ಬೆಂಗಳೂರು ನಗರದಿಂದ ೩೬೦ ಕಿ.ಮೀ ದೂರದಲ್ಲಿರುವ ಸಾಗರ ಪಟ್ಟಣವು ಮಲೆನಾಡು ಪ್ರದೇಶದ ವ್ಯಾಪ್ತಿಗೊಳಪಟ್ಟಿದೆ. ಮಳೆ ಹೆಚ್ಚಾಗಿ ಬೀಳುವ ಸಾಗರ ತಾಲೂಕು ಸಹಜವಾಗಿ ದಟ್ಟವಾದ ಕಾಡು ಮತ್ತು ವಿವಿಧ ರೀತಿಯ ಪ್ರಾಣಿಸಂಕುಲಗಳಿಗೆ ತವರಾಗಿದೆ. ಪ್ರಕೃತಿಪ್ರಿಯರಿಗೆ ಮತ್ತು ಚಾರಣಪ್ರಿಯರಿಗೆ ಸಾಗರ ಸ್ವರ್ಗ. ಶ್ರೀಗಂಧ ಕೆತ್ತನೆಗೆ ರಾಜ್ಯದಲ್ಲೇ ಹೆಸರುವಾಸಿಯಾಗಿರುವ ಸಾಗರವನ್ನು ಶ್ರೀಗಂಧದ ಗುಡಿ ಎಂದೂ ಕರೆಯಲಾಗುತ್ತದೆ.
ಪರಿವಿಡಿ |
[ಬದಲಾಯಿಸಿ] ಪ್ರೇಕ್ಷಣೀಯ ಸ್ಥಳಗಳು
- ಜೋಗ - ಭಾರತದಲ್ಲೇ ಅತ್ಯಂತ ಎತ್ತರವಾದ ಮತ್ತು ಜಗತ್ತಿನಲ್ಲಿ ೨೭ನೆಯ ಸ್ಥಾನದಲ್ಲಿರುವ ವಿಶ್ವ ಪ್ರಸಿದ್ಧ ಜೋಗ ಜಲಪಾತವು ಸಾಗರದಿಂದ ೨೯ ಕಿ.ಮೀ ಅಂತರದಲ್ಲಿದೆ. ಶರಾವತಿ ನದಿಯು ರಾಜ, ರೋರರ್, ರಾಕೆಟ್ ಮತ್ತು ರಾಣಿ ಎಂಬ ನಾಲ್ಕು ಕವಲುಗಳಾಗಿ ೨೭೩ ಮೀ ಎತ್ತರದಿಂದ ದುಮುಕುವ ಜೋಗ ಜಲಪಾತಕ್ಕೆ ಸಾಗರದಿಂದ ಪ್ರತೀ ೫ ನಿಮಿಷಕ್ಕೆ ಒಂದರಂತೆ ಬಸ್ಸಿನ ವ್ಯವಸ್ಥೆ ಇದೆ. ಹೆಚ್ಚಿನ ವಿವರಗಳಿಗೆ ಕ್ಲಿಕ್ ಮಾಡಿ - ಜೋಗ.
- ಇಕ್ಕೇರಿ - ಹೊಯ್ಸಳ ಶೈಲಿಯ ಸುಂದರವಾದ ಕೆತ್ತನೆಗಳಿರುವ ಕೆಳದಿ ಸಂಸ್ಥಾನಕ್ಕೆ ಸೇರಿದ ದೇವಸ್ಥಾನವಿರುವ ಇಕ್ಕೇರಿ ಪಟ್ಟಣ ಸಾಗರ ಪೇಟೆಯಿಂದ ೫ ಕಿ.ಮೀ. ದೂರದಲ್ಲಿದೆ. ಬಸ್ಸು, ಟ್ಯಾಕ್ಸಿ ಅಥವ ಆಟೋಗಳಿಂದ ಸುಲಭವಾಗಿ ಇಕ್ಕೇರಿಯನ್ನು ತಲುಪಬಹುದು.
- ಕೆಳದಿ - ಕೆಳದಿ ರಾಜವಂಶದಿಂದ ಪ್ರಸಿದ್ಧವಾದ ಕೆಳದಿ ಪಟ್ಟಣವು ಸಾಗರದಿಂದ ೭ ಕಿ.ಮೀ ದೂರದಲ್ಲಿದೆ. ಕೆಳದಿ ಸಂಸ್ಥಾನದ ಅರಮನೆ, ಸುಂದರ ಕೆತ್ತನೆಗಳಿರುವ ದೇವಸ್ಥಾನ ಮತ್ತು ಐತಿಹಾಸಿಕ ವಸ್ತುಸಂಗ್ರಹಾಲಯ ಈ ಊರಿನ ಆಕರ್ಷಣೆಗಳು.
- ಹೊನ್ನೇಮರಡು - ಇತ್ತೇಚೆಗೆ ಜನಪ್ರಿಯವಾಗುತ್ತಿರುವ ಹೊನ್ನೇಮರಡು ಶರಾವತಿ ಹಿನ್ನೀರಿನಿಂದ ಆವೃತವಾದ, ಸಾಹಸಪ್ರಿಯರನ್ನು ಆಹ್ವಾನಿಸುವ ಸುಂದರವಾದ ಪ್ರದೇಶ. ಜೋಗಕ್ಕೆ ಹೋಗುವ ದಾರಿಯಲ್ಲಿ ಸಾಗರದಿಂದ ೨೫ ಕಿ.ಮೀ ಗಳ ದೂರದಲ್ಲಿರುವ ಹೊನ್ನೇಮರಡು ನೀರಿನ ಸಾಹಸಕ್ರೀಡೆಗಳಿಗೆ ಪ್ರಶಸ್ತವಾದ ಸ್ಥಳ. ಹೆಚ್ಚಿನ ವಿವರಗಳಿಗೆ ಕ್ಲಿಕ್ ಮಾಡಿ -ಹೊನ್ನೇಮರಡು.
- ಮಾರಿಕಾಂಬ ದೇವಸ್ಥಾನ ಮತ್ತು ಜಾತ್ರೆ - ಸಾಗರ ಪೇಟೆಯ ಮಧ್ಯದಲ್ಲಿರುವ ಮಾರಿಕಾಂಬ ದೇವಸ್ಥಾನ ಸಾಗರದ ಜನಜೀವನ ಮತ್ತು ಇತಿಹಾಸದ ಜೊತೆಗೆ ಬಹುವಾಗಿ ಬೆಸೆದುಕೊಂಡಿದೆ. ೩ ವರ್ಷಗಳಿಗೊಮ್ಮೆ ನಡೆಯುವ ಸಾಗರ ಮಾರಿಕಾಂಬ ಜಾತ್ರೆ ರಾಜ್ಯದಾದ್ಯಂತ ಜನರನ್ನು ಸಾಗರದೆಡೆಗೆ ಆಕರ್ಷಿಸುತ್ತದೆ.
- ವರದಹಳ್ಳಿ - ಶ್ರೀಧರ ಸ್ವಾಮಿಗಳ ಸಮಾಧಿ ಮತ್ತು ಆಶ್ರಮವಿರುವ ಯಾತ್ರಾಸ್ಥಳವಾದ ವರದಹಳ್ಳಿ ಸಾಗರದಿಂದ ೭ ಕಿ.ಮೀ ದೂರದಲ್ಲಿದೆ. ನೆರೆಯ ರಾಜ್ಯವಾದ ಮಹಾರಾಷ್ಟ್ರದಲ್ಲಿ ಹೆಚ್ಚಿನ ಭಕ್ತರನ್ನು ಹೊಂದಿರುವ ವರದಹಳ್ಳಿ ನಿಸರ್ಗದ ಮಧ್ಯೆ ಪ್ರಶಾಂತವಾಗಿ ನೆಲೆಸಿರುವ, ಆಧ್ಯಾತ್ಮಿಕ ಚಿಂತನೆಗೆ ಪ್ರಶಸ್ಥವಾದ ಸ್ಥಳ.
[ಬದಲಾಯಿಸಿ] ಸಾಹಿತ್ಯ, ಕಲೆ, ಸಂಸ್ಕೃತಿ
ಸಾಗರ ತಾಲೂಕಿನ ಜನ ಉಚ್ಛ ಕಲಾರಸಿಕರು ಮತ್ತು ಸಾಹಿತ್ಯಾರಾಧಕರು. ಬಹಳ ಜನ ಕಲಾವಿದರನ್ನ, ಸಾಹಿತಿಗಳನ್ನ ರಾಜ್ಯಕ್ಕೆ ಸಾಗರ ತಾಲೂಕು ನೀಡಿದೆ. ಸಾಗರದ ೭ ಕಿ.ಮೀ ದೂರದಲ್ಲಿ ಮ್ಯಾಗ್ಸೆಸೆ ಪ್ರಶಸ್ತಿ ಪುರಸ್ಕೃತ ಕೆ.ವಿ.ಸುಬ್ಬಣ್ಣ ಕಟ್ಟಿ ಬೆಳೆಸಿದ ನೀನಾಸಂ (ನೀಲಕಂಠೇಶ್ವರ ನಾಟ್ಯ ಸಂಘ) ತನ್ನ ತಿರುಗಾಟಗಳಿಂದಾಗಿ ಬಹು ಪ್ರಸಿದ್ಧ. ವಿವರಗಳಿಗಾಗಿ - ನೀನಾಸಂ.
ಯಕ್ಷಗಾನ ಸಾಗರ ತಾಲೂಕಿನಲ್ಲಿ ಬಹಳ ಪ್ರಸಿದ್ಧವಾದ ಕಲಾಪ್ರಕಾರ. ಬೇಸಿಗೆಯ ಕಾಲದಲ್ಲಿ ಪ್ರತಿದಿನವೂ ಒಂದಿಲ್ಲೊಂದು ಯಕ್ಷಗಾನ ಮೇಳದ ಪ್ರದರ್ಶನ ಏರ್ಪಾಡಾಗಿರುವುದನ್ನು ಕಾಣಬಹುದು.
[ಬದಲಾಯಿಸಿ] ಜನ, ಮನ, ಭಾಷೆ
ಸಾಗರದ ಜನ ಸಾಮಾನ್ಯವಾಗಿ ಶಾಂತಿಪ್ರಿಯರು ಮತ್ತು ಸ್ನೇಹಪ್ರಿಯರು. ಹೆಚ್ಚಿನ ಜನರು ಜೀವನಕ್ಕೆ ವ್ಯವಸಾಯವನ್ನ ಅವಲಂಬಿಸಿದ್ದಾರೆ. ಅಡಿಕೆ ಸಾಗರದ ಪ್ರಮುಖ ಬೆಳೆ. ಭತ್ತ, ಕಬ್ಬು, ವೆನಿಲ್ಲಾ ಮತ್ತಿತರ ಬೆಳೆಗಳು ಕೂಡ ಪ್ರಚಲಿತದಲ್ಲಿವೆ. ಬಹುಪಾಲು ಜನರು ಹವ್ಯಕರಾದ್ದರಿಂದ ಸಹಜವಾಗಿ ಸಾಗರದಲ್ಲಿ ಹವ್ಯಕ ಕನ್ನಡ ಚಾಲ್ತಿಯಲ್ಲಿದೆ. .
[ಬದಲಾಯಿಸಿ] ತಲುಪುವುದು ಹೇಗೆ
ಬೆಂಗಳೂರು ನಗರದಿಂದ ನೇರವಾಗಿ ಬಸ್ಸು ಮತ್ತು ರೈಲಿನ ಸಂಪರ್ಕವಿದೆ. ರಾ.ಹೆ.೨೦೬ರಲ್ಲಿ ಚಲಿಸುವ ಖಾಸಗಿ ಮತ್ತು ಸರ್ಕಾರಿ ಹವಾನಿಯಂತ್ರಿತ ಬಸ್ಸುಗಳಲ್ಲಿ ೮ ಗಂಟೆಗಳ ಅವಧಿಯಲ್ಲಿ ಸಾಗರ ತಲುಪಬಹುದು. ಇದಲ್ಲದೆ ರಾಜ್ಯದ ಇತರ ಪ್ರಮುಖ ಪಟ್ಟಣಗಳು ಮತ್ತು ಮುಂಬೈ ಪಟ್ಟಣದೊಂದಿಗೆ ನೇರವಾದ ಬಸ್ಸು ಮತ್ತು ರೈಲಿನ ಸಂಪರ್ಕವಿದೆ.