ಬೆಳಕು
From Wikipedia
ಬೆಳಕು ಒಂದು ರೀತಿಯ ವಿದ್ಯುದಯಸ್ಕಾಂತೀಯ ವಿಕಿರಣ. ತಾಂತ್ರಿಕವಾಗಿ, ಯಾವುದೇ ಪುನರಾವರ್ತನೆಯನ್ನು ಹೊಂದಿರುವ ವಿದ್ಯುದಯಸ್ಕಾಂತೀಯ ವಿಕಿರಣವನ್ನು ಬೆಳಕು ಎನ್ನಬಹುದು. ಆದರೆ ಮಾನವರ ಕಣ್ಣಿಗೆ ಒಂದು ನಿಗದಿತ ವ್ಯಾಪ್ತಿಯೊಳಗೆ ಇರುವ ಪುನರಾವರ್ತನೆ ಹೊಂದಿರುವ ವಿಕಿರಣ ಮಾತ್ರ ಕಂಡು ಬಂದು, ಇದಕ್ಕೆ ಆಡುಭಾಷೆಯಲ್ಲಿ ಬೆಳಕು ಎನ್ನುತ್ತೇವೆ. ಬೆಳಕು ಮೂಲಭೂತವಾಗಿ ಫೋಟಾನ್ ಎಂಬ ಸೂಕ್ಷ್ಮ ಕಣಗಳನ್ನು ಹೊಂದಿರುತ್ತದೆ.
ಬೆಳಕಿನ ಮೂರು ಮೂಲಭೂತ ಲಕ್ಷಣಗಳೆಂದರೆ:
ತೀವ್ರತೆ: ತಾಂತ್ರಿಕವಾಗಿ, ಇದು ಬೆಳಕಿನ ಅಲೆಯ ವಿಸ್ತಾರವನ್ನು ಸೂಚಿಸುತ್ತದೆ. ಮಾನವರ ಕಣ್ಣಿಗೆ ಬೆಳಕು ಎಷ್ಟು ಪ್ರಕಾಶಮಾನವಾಗಿದೆ ಎಂಬುದರ ಪರಿಮಾಣ ಇದು
ಪುನರಾವರ್ತನೆ: ಮಾನವರ ಕಣ್ಣಿಗೆ, ಈ ಗುಣ ಬೆಳಕಿನ "ಬಣ್ಣ"ವಾಗಿ ವ್ಯಕ್ತವಾಗುತ್ತದೆ. ತಾಂತ್ರಿಕವಾಗಿ, ಇದು ಬೆಳಕಿನ ಅಲೆಯ ಪುನರಾವರ್ತನಾ ಸಂಖ್ಯೆ.
ಧ್ರುವಿಕರಣ: ಇದು ಬೆಳಕಿನ ಅಲೆಯ ಕಂಪನದ ದಿಕ್ಕನ್ನು ಸೂಚಿಸುತ್ತದೆ. ಮಾನವರ ಕಣ್ಣಿಗೆ ಇದು ಸಾಮಾನ್ಯವಾಗಿ ವ್ಯಕ್ತವಾಗುವುದಿಲ್ಲ.
ಪರಿವಿಡಿ |
[ಬದಲಾಯಿಸಿ] ಬೆಳಕಿನ ವೇಗ
ಬೆಳಕಿನ ವೇಗ ಸುಮಾರು ಸೆಕೆಂಡಿಗೆ 2.99 ಲಕ್ಷ ಕಿಮೀ. ಅನೇಕ ಭೌತಶಾಸ್ತ್ರಾಜ್ಜರು ಬೆಳಕಿನ ವೇಗದ ಮೇಲೆ ನಡೆಸಿದ ಪ್ರಯೋಗಗಳ ಮೂಲ್ಕ ಈ ಆಧುನಿಕ ಫಲಿತಾಂಶವನ್ನು ಪಡೆಯಲಾಗಿದೆ. ಬೆಳಕಿನ ವೇಗವನ್ನು ಅಳೆಯಲು ಮೊದಲ ಮುಖ್ಯ ಪ್ರಯತ್ನ ನಡೆಸಿದವರು ಡೆನ್ಮಾರ್ಕ್ ನ ಓಲ್ ರೋಮರ್. ಗುರು ಗ್ರಹದ ಉಪಗ್ರಹಗಳ ಚಲನೆಯ ಲೆಕ್ಕಾಚಾರಗಳು ಹಾಗೂ ಪ್ರಾಯೋಗಿಕ ಅಳತೆಗಳು ಸರಿಯಾಗಿ ಹೊಂದಿಕೆಯಾಗದ್ದನ್ನು ಗಮನಿಸಿ, ಇದರ ಆಧಾರದ ಮೇಲೆ ಬೆಳಕಿನ ವೇಗ ಸುಮಾರು ಸೆಕೆಂಡಿಗೆ 2.27 ಲಕ್ಷ ಕಿಮೀ ಎಂದು ಅವರು ಪ್ರತಿಪಾದಿಸಿದರು. ಬೆಳಕಿನ ವೇಗವನ್ನು ಅಳೆಯಲು ನಡೆಸಲಾದ ಪ್ರಸಿದ್ಧ ಆಧುನಿಕ ಪ್ರಯೋಗ ಆಲ್ಬರ್ಟ್ ಮೈಕೇಲ್ ಸನ್ ಅವರದ್ದು - ಇದರಂತೆ ಬೆಳಕಿನ ವೇಗ ಸೆಕೆಂಡಿಗೆ ಸುಮಾರು 2.99 ಲಕ್ಷ ಕಿಮೀ ಎಂದು ಕಂಡುಹಿಡಿಯಲಾಯಿತು.
[ಬದಲಾಯಿಸಿ] ವಕ್ರೀಕರಣ
ಮೇಲಿನ ಬೆಳಕಿನ ವೇಗ ಬೆಳಕು ನಿರ್ವಾತದಲ್ಲಿ ಚಲಿಸುವಾಗ ಅದು ಹೊಂದಿರುವ ವೇಗ. ಇತರ ಮಾಧ್ಯಮಗಳಲ್ಲಿ (ಗಾಜು ಇತ್ಯಾದಿ) ಬೆಳಕಿನ ವೇಗ ಸ್ವಲ್ಪ ಕಡಿಮೆ ಇರುತ್ತದೆ. ಇದರಿಂದ, ಬೆಳಕು ಒಂದು ಮಾಧ್ಯಮದಿಂದ ಇನ್ನೊಂದು ಮಾಧ್ಯಮಕ್ಕೆ ಹೋದಾಗ ದಿಕ್ಕು ಬದಲಿಸುತ್ತದೆ. ಇದಕ್ಕೆ ವಕ್ರೀಕರಣ ಎನ್ನಲಾಗುತ್ತದೆ.
[ಬದಲಾಯಿಸಿ] ವರ್ಣ
ಮಾನವರ ಕಣ್ಣಿಗೆ ನಿಗದಿತ ವ್ಯಾಪ್ತಿಯಲ್ಲಿರುವ ಪುನರಾವರ್ತನೆಯ ಬೆಳಕಿನ ಕಿರಣಗಳು ಮಾತ್ರ ಗೋಚರಿಸುತ್ತವೆ. ಈ ವಿವಿಧ ಪುನಾರಾವರ್ತನೆ ಗಳನ್ನು ಮಾನವರ ಮೆದುಳು ಬೆಳಕಿನ ಬಣ್ಣವಾಗಿ ಅರ್ಥೈಸುತ್ತದೆ. ಹೀಗೆ, ಗೋಚರ ವ್ಯಾಪ್ತಿಯ ಅತಿ ಕಡಿಮೆ ಪುನರಾವರ್ತನೆಯ ಬೆಳಕು "ಕೆಂಪು" ಬಣ್ಣದ್ದಾಗಿ ಕಂಡು ಬಂದರೆ, ಈ ವ್ಯಾಪ್ತಿಯ ಅತಿ ಹೆಚ್ಚು ಪುನರಾವರ್ತನೆ ಹೊಂದಿರುವ ಬೆಳಕು "ನೇರಳ" ಬಣ್ಣದ್ದಾಗಿ ತೋರುತ್ತದೆ. ಇದಕ್ಕಿಂತ ಹೆಚ್ಚು ಪುನರಾವರ್ತನೆ ಹೊಂದಿರುವ ಬೆಳಕು ನಮ್ಮ ಕಣ್ಣಿಗೆ ಗೋಚರವಾಗುವುದಿಲ್ಲ - ಈ ಬೆಳಕನು "ಅತಿನೇರಳ" ಎಂದು ಕರೆಯಲಾಗುತ್ತದೆ. ಹಾಗೆಯೇ, ಕೆಂಪು ಬೆಳಕಿಗಿಂತ ಕಡಿಮೆ ಪುನರಾವರ್ತನೆ ಹೊಂದಿರುವ ಬೆಳಕು ಸಹ ನಮ್ಮ ಕಣ್ಣಿಗೆ ಗೋಚರವಾಗುವುದಿಲ್ಲ.